ಕುಟುಂಬಯೋಜನೆ

ದಂಪತಿಗಳು ಸ್ವತಂತ್ರ್ಯವಾಗಿ ಹೊಣೆಗಾರಿಕೆಯಿಂದ, ಲಭ್ಯವಿರುವ ವೈಜ್ಞಾನಿಕ ವಿಧಾನಗಳಿಂದ ಮಕ್ಕಳ ಸಂಖ್ಯೆಯನ್ನು ನಿಗದಿಗೊಳಿಸುವಿಕೆಗೆ “ಕುಟುಂಬಯೋಜನೆ” ಎನ್ನುತ್ತಾರೆ.

	ಕುಟುಂಬ ಯೋಜನೆಯಿಂದ ಅನಾವಶ್ಯಕವಾದ ಮಕ್ಕಳ ಜನನವನ್ನು ತಡೆಗಟ್ಟಬಹುದು. ಎರಡು ಮಕ್ಕಳ ಜನನದ ಅಂತರವನ್ನು ನಿಗದಿಗೊಳಿಸಬಹುದು. ಮಕ್ಕಳ ಸಂಖ್ಯೆಯನ್ನು ಮಿತಿಗೊಳಿಸಬಹುದು.

	ಕುಟುಂಬಯೋಜನೆಯಿಂದ ತಾಯಿ ಮಗುವಿನ ಆರೋಗ್ಯ ಉತ್ತಮವಾಗಿರುತ್ತದೆ. ಕುಟುಂಬದ ರಾಷ್ಟ್ರದ ಹಾಗೆ ವಿಶ್ವದ ಆರೋಗ್ಯ ಆರ್ಥಿಕ ಸ್ಥಿತಿ ಉತ್ತಮಗೊಳ್ಳುತ್ತದೆ. ಜನಸಂಖ್ಯಾ ಸ್ಪೋಟವನ್ನು ತಡೆಗಟ್ಟುವುದರಿಂದ ಎಲ್ಲರಿಗೂ ಉತ್ತಮ ಆಹಾರ, ಪರಿಸರ, ಆರೋಗ್ಯ, ಉದ್ಯೋಗ ಸಂಪನ್ಮೂಲ ಲಭಿಸುತ್ತದೆ. ಜೀವನ ಮಟ್ಟ ಸುಧಾರಣೆಗೊಳ್ಳುತ್ತದೆ.

	ಶಸ್ತ್ರಚಿಕಿತ್ಸೆ ಪಾಲಿಸಲು ಹಲವಾರು ವಿಧಾನಗಳಿವೆ. ಸಲಕರಣೆಗಳು ಲಭ್ಯವಿದೆ. ದಂಪತಿಗಳು ತಮಗೆ ಸೂಕ್ತವೆನಿಸುವ ವಿಧಾನಗಳನ್ನು ಆಯ್ಕೆಮಾಡಿಕೊಳ್ಳಬಹುದು.

	ಪುರುಷರಿಗಾಗಿ ಲಿಂಗಕವಚ (ನಿರೋದ್) ಇದೆ. ಇದೊಂದು ತೆಳ್ಳನೆ ಮೃದು ರಬ್ಬರ್ ಚೀಲ. ಸಂಬೋಗ ಪೂರ್ವಕದಲ್ಲಿ ಪುರುಷರು ಇದನ್ನು ಉದ್ರೇಕಗೊಂಡ 	 ಶಿಶ್ನಕ್ಕೆ ಹಾಕಿಕೊಳ್ಳಬೇಕು. ಇದು ಶಿಶ್ನವನ್ನು  ಮೃದುವಾಗಿ ಆವರಿಸಿಕೊಳ್ಳುತ್ತದೆ. ಸಂಬೋಗವಾದ  ಅನಂತರ ಲಿಂಗಕವಚವನ್ನು ಎಚ್ಚರಿಕೆಯಿಂದ ಹೊರಜಾರಿಸಿ ತೆಗೆದು ವಿಸರ್ಜಿಸಬೇಕು. ವೀರ್ಯವು  ಶಿಶ್ನ ಕವಚದಲ್ಲಿಯೆ ಕಲೆಯುವುದರಿಂದ ವೀರ್ಯ ಯೋನಿಯಲ್ಲಿ ಸೇರುವುದಿಲ್ಲ. ಹೀಗಾಗಿ ಗರ್ಬಧಾರಣೆಯಾಗುವ  ಸಂಭವ ಇರುವುದಿಲ್ಲ. ಲಿಂಗಕವಚ ಅತ್ಯಂತ ಫಲಕಾರಿಯಾದ ಗರ್ಬನಿರೋಧಕ ಸಾಧನ. ಇದರ ಬಳಕೆಯಿಂದ ಲೈಂಗಿಕವಾಗಿ ಹರಡುವ ಕಾಯಿಲೆಗಳು ಮತ್ತು ಹೆಚ್.ಐ.ವಿ.(ಏಡ್ಸ್) ಸೋಂಕಿನಿಂದಲೂ ಉತ್ತಮ ರಕ್ಷಣೆ ದೊರೆಯುತ್ತದೆ.

	ಸ್ತ್ರೀಯರಿಗಾಗಿ ಪ್ರತಿದಿನ ನುಂಗುವ ಮಾತ್ರಗಳು ಇವೆ. ಗರ್ಭಕೋಶದಲ್ಲಿ ಅಳವಡಿಸುವ ಕಾಪರ್ ಟೀ ಎನ್ನುವ ಸಾಧನವಿದೆ. ಇತ್ತೀಚೆಗೆ ದೇಹದಲ್ಲಿ ಅಳವಡಿಸುವ ಹಾರ್ಮೋನ್ ಯುಕ್ತ ಸಲಕರಣೆಗಳು ಬಂದಿವೆ. ಗಂಡಸರಿಗೂ ನುಂಗುವ ಮಾತ್ರೆಗಳು ಬಂದಿವೆ. ಇಷ್ಟಲ್ಲದೆ ಮಹಿಳೆಯರಲ್ಲಿ ಅಂಡೋತ್ಪತ್ತಿ ಆಗಿರುವ ದಿನಗಳಲ್ಲಿ ಮಾತ್ರ ಗರ್ಭಧಾರಣೆಯಾಗುತ್ತದೆ. ಈ ದಿನಗಳನ್ನು ಹೊರತುಪಡಿಸಿ ಉಳಿದ ದಿನ ನಡೆಸುವ ಸಂಬೋಗದಿಂದ ಗರ್ಬಧಾರಣೆಯಾಗುವುದಿಲ್ಲ. ಹೀಗಾಗಿ ದಂಪತಿಗಳು ಸುರಕ್ಷಾ ದಿನಗಳಲ್ಲಿ ಮಾತ್ರ ಸಂಬೋಗ ನಡೆಸಿ ಉಳಿದ ದಿನಗಳಲ್ಲಿ ಸಂಬೋಗಿಸದೇ ಇರುವುದರಿಂದಲೂ ಕುಟುಂಬ ಯೋಜನೆಯನ್ನು  ಪಾಲಿಸಬಹುದು.

	ಇನ್ನುಮುಂದೆ ಶಾಶ್ವತವಾಗಿ ಮಗು ಬೇಡವೇ ಬೇಡ ಎನ್ನುವ ದಂಪತಿಗಳಿಗಾಗಿ ಸಂತಾನಹರಣ ಶಸ್ತ್ರಚಿಕಿತ್ಸೆಗಳೂ ಇವೆ. ಪುರುಷರಲ್ಲಿ ವೀರ್ಯನಾಳ, ಸ್ತ್ರೀಯರಲ್ಲಿ ಅಂಡನಾಳಕ್ಕೆ ಶಸ್ತ್ರಚಿಕಿತ್ಸೆ ಮಾಡುತ್ತಾರೆ. ಚಿಕಿತ್ಸೆಯನ್ನು ಅನುಕ್ರಮವಾಗಿ ವ್ಯಾಸೆಕ್ಟಮಿ ಹಾಗೂ ಟ್ಯೂಬೆಕ್ಟಮಿ ಎನ್ನುತ್ತಾರೆ. ಆಧುನಿಕ ತಂತ್ರಜ್ಞಾನದ ಬೆಳವಣಿಗೆಯಿಂದ ಈಗ ಸಂತಾನಹರಣ ಶಸ್ತ್ರಚಿಕಿತ್ಸೆಗಳು ಬಹಳ ಸರಳವಾಗಿವೆ. ಕೆಲವೇ ನಿಮಿಷಗಳಲ್ಲಿ  ಶಸ್ತ್ರಚಿಕಿತ್ಸೆ ನೋವಿಲ್ಲದೆ ನಡೆಯುತ್ತದೆ. ಶಸ್ತ್ರಚಿಕಿತ್ಸೆಗೆ ಒಳಗಾದವರು ಕೆಲವೇ ಗಂಟೆಗಳಲ್ಲಿ ಚೇತರಿಸಿಕೊಳ್ಳುತ್ತಾರೆ.

	ಕುಟುಂಬಯೋಜನೆ ಒಂದು ಮುಖ್ಯ ರಾಷ್ಟ್ರೀಯ ಕಾರ್ಯಕ್ರಮ. ಜನರು ಈ ಯೋಜನೆಯ ಮಹತ್ವವನ್ನು ಅರಿತು ಜವಾಬ್ದಾರಿಯಿಂದ ಕುಟುಂಬಯೋಜನೆಯಲ್ಲಿ ಪಾಲ್ಗೊಳ್ಳಬೇಕು. ಸರ್ಕಾರ ಕುಟುಂಬ ಯೋಜನೆಯನ್ನು ಸಫಲಗೊಳಿಸಲು ಸಾಕಷ್ಟು ಶ್ರಮಿಸುತ್ತಿದೆ. ಜನರ ಮನೆಯ ಬಾಗಿಲಲ್ಲೇ ಸೇವ ಸೌಲಭ್ಯಗಳು ಲಭ್ಯವಾಗುವಂತಹ  ಅವಕಾಶಗಳನ್ನು  ಕಲ್ಪಿಸಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ